ಧರ್ಮಸಿಂಗ್ ಎನ್-
1936 ಕರ್ನಾಟಕ ರಾಜ್ಯದ ಮುಖ್ಯಮಂತ್ರಿ (2004 ಮೇನಿಂದ) ಹಿರಿಯ ರಾಜಕಾರಣಿ. ಗುಲ್ಬರ್ಗ ಜಿಲ್ಲೆ ಜೇವರ್ಗಿ ತಾಲ್ಲೂಕಿನ ಭೀಮಾ ತೀರದ ಪುಟ್ಟ ಗ್ರಾಮ ನೆಲೋಗಿಯಲ್ಲಿ ನಾರಾಯಣಸಿಂಗ್ ದಂಪತಿಗಳ ಮಗನಾಗಿ 1936 ಡಿಸೆಂಬರ್ 25ರಂದು ಜನಿಸಿದರು. ಇವರದು ಒಂದು ಸಾಮಾನ್ಯ ಕೃಷಿ ಕುಟುಂಬ. ಪ್ರಾಥಮಿಕ ಶಿಕ್ಷಣವನ್ನು ಹುಟ್ಟೂರಿನಲ್ಲೇ ಪೂರೈಸಿದರು. ಬಾಲ್ಯದಿಂದಲೂ ಜನಾನುರಾಗ ಮತ್ತು ಸಾತ್ವಿಕ ಗುಣಗಳನ್ನು ರೂಢಿಸಿಕೊಂಡಿದ್ದ ಇವರು ಹೆಚ್ಚಿನ ವಿದ್ಯಾಭ್ಯಾಸ ಮಾಡುವುದರ ಬಗ್ಗೆ ದೃಢ ನಿಶ್ಚಯವುಳ್ಳವರಾಗಿದ್ದರು. ವಿದ್ಯಾರ್ಥಿ ಜೀವನದಲ್ಲಿ ಗಳಿಕೆಗಾಗಿ ಮನೆಪಾಠ ಹೇಳಿಕೊಡುವುದರಿಂದ ಹಿಡಿದು ಶಾಲಾಮಾಸ್ತರಾಗುವ ತನಕ ಸ್ವಾವಲಂಬಿಯಾಗಲು ಪ್ರಯತ್ನಿಸಿದರು. ಅನೇಕ ಹಿತೈಷಿಗಳ ನೆರವೂ ಇವರ ಶಿಕ್ಷಣಕ್ಕೆ ಉತ್ತೇಜನ ನೀಡಿತು. ಇವರು ತಮ್ಮ ಆಸಕ್ತಿಯ ವಿಷಯವಾಗಿದ್ದ ಕಾನೂನು ವಿಷಯದಲ್ಲಿ ಹೈದರಾಬಾದ್‍ನಲ್ಲಿ ಓದಿ ಬಿ.ಎಲ್.ಪದವಿ ಗಳಿಸಿದರು.

	ಕಾನೂನು ಪದವೀಧರರಾದ ಅನಂತರ ಗುಲ್ಬರ್ಗದಲ್ಲಿ ವಕೀಲಿ ವೃತ್ತಿ ಕೈಗೊಂಡರು. ಗುಲ್ಬರ್ಗ ನಗರ ಸಭೆಯ ಚುನಾವಣೆಯಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸಿ ಜಯಶೀಲರಾದರು. ಎಡಪಂಥದತ್ತ ಒಲವಿದ್ದ ಇವರು 1969ರಲ್ಲಿ ಕಾಂಗ್ರೆಸ್ ಇಬ್ಧಾಗವಾದಾಗ ಇಂದಿರಾಗಾಂಧಿಯವರ ಆಡಳಿತ ಕಾಂಗ್ರೆಸ್ ಪಕ್ಷ ಸೇರಿದರು. ತರುವಾಯ ಜಿಲ್ಲಾ ಕಾಂಗ್ರೆಸ್ ಸಮಿತಿಯ ಪ್ರಧಾನ ಕಾರ್ಯದರ್ಶಿಯಾಗಿ ಕಾರ್ಯನಿರ್ವಹಿಸಿದರು. ಬಾಲ್ಯದ ಬಡತನವನ್ನೂ ಮರೆಯದೆ ಎಲ್ಲರೊಂದಿಗೆ ಒಂದಾಗಿ ಸಾಗುವ ಹೊಂದಾಣಿಕೆಯ ಗುಣವನ್ನು ರೂಢಿಸಿಕೊಂಡ ಇವರು ಬಹು ಬೇಗನೆ ಸಾರ್ವಜನಿಕ ವಲಯದಲ್ಲಿ ಜನಪ್ರಿಯರಾದರು.

	1972ರಲ್ಲಿ ಡಿ.ದೇವರಾಜ ಅರಸು ಕಾಂಗ್ರೆಸ್ ಸಂಚಾಲಕರಾಗಿದ್ದಾಗ ಪಕ್ಷದಿಂದ ರಾಜ್ಯ ವಿಧಾನ ಸಭೆಗೆ ಜೇವರ್ಗಿ ಕ್ಷೇತ್ರದಿಂದ ಸ್ಪರ್ಧಿಸಿದರು. ಆಗ ಇದ್ದ ಇಂದಿರಾ ಅಲೆಯಿಂದಾಗಿ ಸುಲಭವಾಗಿ ಗೆದ್ದರು. ಅನಂತರ ಲೋಕಸಭೆಗೆ ಸ್ಪರ್ಧಿಸಿ ಆಯ್ಕೆಯಾದರು (1980). ಆದರೆ ಇಂದಿರಾಗಾಂಧಿಯವರ ಅಪೇಕ್ಷೆಯ ಮೇರೆಗೆ ಕೇರಳದ ಸ್ಟೀಪನ್‍ರವರಿಗೆ ಸ್ಥಾನ ತೆರವು ಮಾಡಿಕೊಟ್ಟರು. ತರುವಾಯ ರಾಜ್ಯ ಸಚಿವ ಸಂಪುಟ ಸೇರಿದರು. ಜನರ ಕುಂದುಕೊರತೆಗಳಿಗೆ ಸದಾ ಸ್ಪಂದಿಸುತ್ತಿದ್ದ ಇವರು ಸತತವಾಗಿ ಜೇವರ್ಗಿ ಕ್ಷೇತ್ರದಿಂದ ವಿಧಾನಸಭೆಗೆ ಚುನಾಯಿತರಾಗುತ್ತ ಬಂದರು. ಇವರು ವಿವಿಧ ಸಂದರ್ಭಗಳಲ್ಲಿ ನಗರಾಭಿವೃದ್ಧಿ, ಕಂದಾಯ, ಗೃಹ, ಅಬ್ಕಾರಿ, ಸಮಾಜಕಲ್ಯಾಣ, ಲೋಕೋಪಯೋಗಿ ಮೊದಲಾದ ಖಾತೆಗಳನ್ನು ನಿರ್ವಹಿಸಿದರು. 199798ರಲ್ಲಿ ಇವರು ಕರ್ನಾಟಕ ಪ್ರದೇಶಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾಗಿ ಸೇವೆಸಲ್ಲಿಸಿದರು.

	ಇವರು ಆರ್ಥಿಕವಾಗಿ ಹಿಂದುಳಿದ ರಜಪೂತ ಸಮುದಾಯಕ್ಕೆ ಸೇರಿದವರು. ಬಹು ಪೂರ್ವದಲ್ಲಿ ಇವರ ಹಿರಿಯರು ಉತ್ತರ ಭಾರತದ ಕಡೆಯಿಂದ ಬಂದು ನೆಲೆಸಿದರೆಂದು ತಿಳಿದುಬರುತ್ತದೆ. 2004ರಲ್ಲಿ ನಡೆದ ರಾಜ್ಯವಿಧಾನಸಭಾ ಚುನಾವಣೆಯಲ್ಲಿ ಯಾವ ಪಕ್ಷಕ್ಕೂ ಸ್ಪಷ್ಟಬಹುಮತ ಬಾರದ ಸ್ಥಿತಿಯಲ್ಲಿ ಕಾಂಗ್ರೆಸ್ ಮತ್ತು ಜಾತ್ಯಾತೀತ ಜನತಾದಳ ಪಕ್ಷಗಳ ಸಮ್ಮಿಶ್ರ ಸರ್ಕಾರದ ರಚನೆಯಾಯಿತು. ಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕರಾಗಿ ಆಯ್ಕೆಯಾದ ಧರ್ಮಸಿಂಗ್ ಅವರು 2004 ಮೇ 28ರಂದು ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದರು. ಪ್ರಭಾವತಿ ಇವರ ಪತ್ನಿ, ಇವರಿಗೆ ಇಬ್ಬರು ಪುತ್ರರು, ಒಬ್ಬ ಪುತ್ರಿ ಇದ್ದಾರೆ.		(ಐ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ